ಚಿತಾಲ್ -
ನೋಟಾಪ್ಟರಿಡೀ ಕುಟುಂಬಕ್ಕೆ ಸೇರಿದ ಒಂದು ಸಿಹಿನೀರು ಮೀನು. ನೋಟಾಪ್ಟರಿಸ್ ಚಿತಾಲ ಇದರ ಶಾಸ್ತ್ರೀಯ ಹೆಸರು. ದೇಹದ ಉದ್ದ ಸುಮಾರು 1 ಅಡಿ. ಕೆಲವು ಸಲ 3 ಅಡಿಯನ್ನೂ ಮೀರುವುದುಂಟು. ಇದು ಭಾರತದ ಅತಿ ಪ್ರಮುಖ ನದಿಗಳಾದ ಗಂಗಾ, ಬ್ರಹ್ಮಪುತ್ರ ಮತ್ತು ಮಹಾನದಿಗಳಲ್ಲಿ ಮಾತ್ರ ಕಂಡುಬರುತ್ತದೆ. ಚಿತಾಲ್ ಒಂದು ಚಪ್ಪಟೆ ಮೀನು. ಬೆನ್ನು ಗೋಪುರದಾಕಾರದಲ್ಲಿ ಬಾಗಿದೆ. ಬಹಳ ಸಣ್ಣ ತಲೆ ಗುದದ ಉದ್ದನೆಯ ಈಜುರೆಕ್ಕೆ, ಈ ರೆಕ್ಕೆ ಬಾಲದ ಈಜುರೆಕ್ಕೆಯೊಂದಿಗೆ ಸೇರಿಕೊಂಡಿರುವುದು, ದೇಹದ ಹಿಂಭಾಗದಲ್ಲಿ ಆಚೀಚೆ ಪಟ್ಟಿಯಾಕಾರದ ಗುರುತುಗಳು ಇರುವುದು, ತಾಮ್ರ ಮಿಶ್ರಿತ ಕಂದುಬಣ್ಣ, ಬಾಲದ ಈಜುರೆಕ್ಕೆಯ ಬಳಿ ಕಪ್ಪು ಬಣ್ಣದ ಚುಕ್ಕೆಗಳಿರುವುದು ಈ ಮೀನಿನ ಪ್ರಮುಖ ಲಕ್ಷಣಗಳು. ಪ್ರೌಢ ಚಿತಾಲ್ ಮೀನಿಗೆ ಇತರ ಬಗೆಯ ಸಣ್ಣ ಮೀನುಗಳೇ ಆಹಾರ. ಸಣ್ಣ ಮರಿಯ ಸ್ಥಿತಿಯಲ್ಲಿದ್ದಾಗ ಕಾರ್ಪು ಮರಿಗಳನ್ನು ಮತ್ತು ಕೀಟಗಳ ಡಿಂಬಗಳನ್ನು ತಿನ್ನುತ್ತದೆ. ಚಿತಾಲ್ ಮೀನು ನಿಂತ ನೀರಿನಲ್ಲಿ ಮೊಟ್ಟೆಯಿಡುತ್ತದೆ. ಸಾಮಾನ್ಯವಾಗಿ ಜಲಸಸ್ಯಗಳ ಮೇಲೆಯೇ ಮೊಟ್ಟೆಯಿಡುವುದಾದರೂ ಕೆಲವು ಸಲ ಗೂಡನ್ನು ರಚಿಸುವುದುಂಟು. ಚಿತಾಲ್ ಬಲು ರುಚಿಯಾದ ಮೀನೆಂದು ಹೆಸರಾಗಿದೆ. ಆದರೆ ಇದನ್ನು ಸದ್ಯಕ್ಕೆ ಎಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಸಾಕುತ್ತಿಲ್ಲ.
(ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ